ಟೆಲಿಯಾಸ್ಟಿಯೈ
ಆಕ್ಟಿನಾಪರಿಜಿಯೈ ವರ್ಗದಲ್ಲಿರುವ ಮೂರು ಗಣಗಳಲ್ಲೊಂದು. ಉಳಿದ ಗಣಗಳಾದ ಕಾಂಡ್ರಾಸ್ಟಿಯೈ ಮತ್ತು ಹೊಲಾಸ್ಟಿಯೈ ಗಣಗಳ ಮೀನುಗಳು ಟೆಲಿಯಾಸ್ಟಿಯೈ ಗಣದ ಮೀನುಗಳು ವಿಕಾಸದ ದೃಷ್ಟಿಯಿಂದ ಮುಂದುವರಿದಂಥವು. ಅಸ್ಥಿಪಂಜರದಲ್ಲಿ ಮೂಳೆಗಳನ್ನು ಒಳಗೊಂಡ ಶೀತರಕ್ತದ ಜಲಚರ ಜೀವಿಗಳಿವು. ಕಿವಿರುಗಳ ಮೂಲಕ ಉಸಿರಾಡುತ್ತವೆ. ಮತ್ತು ಈಜುರೆಕ್ಕೆಗಳ ಸಹಾಯದಿಂದ ಚಲಿಸುತ್ತವೆ. ಬಹುತೇಕ ಮೀನುಗಳು ಹಾಗೂ ಭಾರತದ ಮಲೆಟ್‍ನಂಥ ಆಹಾರಯೋಗ್ಯ ಮೀನುಗಳು ಈ ಗಣಕ್ಕೆ ಸೇರಿವೆ.

	ಸಾಮಾನ್ಯ ಲಕ್ಷಣಗಳು : ಈ ಗಣದ ಮೀನುಗಳಲ್ಲಿ ನಾಲ್ಕು ಜೊತೆ ಕಿವಿರುಗಳಿವೆ. ಅವೆಲ್ಲ ಒಂದು ಕಿವಿರು ಮುಚ್ಚಳದಿಂದ ಆವೃತವಾಗಿವೆ. ದೇಹವನ್ನು ಹಲ್ಲುಗಳುಳ್ಳ ಹಣಿಗೆಯಂಥ ಅಥವಾ ವೃತ್ತಕಾರದ ಶಲ್ಕಗಳು (ಸ್ಕೇಲ್ಸ್) ಆವರಿಸಿವೆ. ಬೆನ್ನಿನ ಮೇಲೆ 2 ರೆಕ್ಕೆಗಳೂ ಸಮಪಾಲಿಯಾದ ಬೀಸಣಿಗೆಯಂಥ ಬಾಲದ ರೆಕ್ಕೆಯೂ ಹೊಟ್ಟೆಯ ರೆಕ್ಕೆಯೂ ಇವೆ. ಇವೆಲ್ಲ ಒಂಟಿ ರೆಕ್ಕೆಗಳು. ಕಿವಿರು ಮುಚ್ಚಳದ ಹಿಂದೆ ತೋಳಿನ ಮತ್ತು ತೊಡೆಯ ಜೋಡಿ ರೆಕ್ಕೆಗಳಿವೆ. ಪಾಶ್ರ್ವ ಸಂವೇದನಾಂಗದ ರೇಖೆಯ (ಲ್ಯಾಟರಲ್‍ಲೈನ್ ಸೆನ್ಸ ಆರ್ಗನ್) ಕಾಲುವೆ ಸ್ಟಷ್ಟವಾಗಿ ರೂಪುಗೊಂಡಿಲ್ಲ. ಕೆಲವು ಮೀನುಗಳಲ್ಲಿ ವೈವಿಧ್ಯರಹಿತ ಹಲ್ಲುಗಳು ಉಂಟು ಮತ್ತು ಕೆಲವು ದಂತರಹಿತ ಮೂಗಿನ ಹೊಳ್ಳೆಗಳು ಒಳಗಡೆ ಗಂಟಲಿಗೆ ತೆರೆಯುವುದಿಲ್ಲ. ಜಠರ ಮಂದವಾದ ಮಾಂಸಭಿತ್ತಿಯಿಂದಾದ ಗಿಜóರ್ಡ್ ರೂಪದಲ್ಲಿದೆ. 5 ಪೈಲೋರಿಕ್ ಸೀಕೆಗಳಿವೆ. ಇವು ಕುರುಡು ಸಂಚಿಗಳಂತಿವೆ. ಕರುಳು ಉದ್ದವಾದ ಸುರುಳಿಯಂತಿದೆ. ಗುದದ್ವಾರದ ಗ್ರಂಥಿಗಳಾಗಲಿ ಕ್ಲೋಯಕವಾಗಲಿ ಇಲ್ಲ. ಸ್ಟೈರಕಲ್ ಅಥವಾ ಶ್ವಾಸರಂಧ್ರವೂ ಇಲ್ಲ. ಜೀರ್ಣಾಂಗಗಳಿಗೆ ಸೇರಿದಂತೆ ಅಪೂರ್ಣವಾಗಿ ವಿಭಾವಾಗಿರುವ ಮೂರು ಹಾಲೆಗಳುಳ್ಳ ಪಿತ್ತಕೋಶವೂ ಹರಡಿಕೊಂಡಿರುವ ಮೇದೋಜೀರಕ ಗ್ರಂಥಿಯೂ ಇವೆ. ಕಿವಿರುಗಳು ಪೂರ್ಣ ರೂಪಿನವು (ಹಾಲೊಬ್ರ್ಯಾಂಕ್). ಅವುಗಳ ನಡುವಣದಿಂಡು (ಸೆಪ್ಟಮ್) ಕ್ಷೀಣವಾಗಿದೆ. ಕಿವಿರುಗಳು ದಿಂಡಿನಿಂದ ಮುಂದಕ್ಕೆ ಗರಿಗಳಂತೆ ಚಾಚಿಕೊಂಡಿವೆ. ಶ್ವಾಸಕೋಶಗಳಿಲ್ಲ. ಗಾಳಿಗೂಡು ಅಥವಾ ವಾತಾಶಯ (ಏರ್ ಬ್ಲಾಡರ್) ಇದ್ದರೂ ಮೀನು ನೀರನಲ್ಲಿ ಚಲಿಸಲು ಅನುಕೂಲಿಸುವಂತೆ ದೇಹದ ಸಾಪೇಕ್ಷ ಗುರುತ್ವವನ್ನು ಬದಲಾಯಿಸುವುದಕ್ಕೆ ಮಾತ್ರ ಇದು ಬಳಕೆಯಾಗುತ್ತದೆ. ಉದರ ಮಹಾಧಮನಿಯ ಆರಂಭದಲ್ಲಿ ಧಮನಿ ಉಬ್ಬಿದಂತಿದ್ದರೂ ಸ್ಥಿತಿಸ್ಥಾಪನಾಶಕ್ತಿ ಪಡೆದಿಲ್ಲ. ಅಂದರೆ ಅದು ಬಲ್ಬಸ್ ಆರ್ಟೀರಿಯೋಸಸ್ ರೂಪದ್ದಲ್ಲಿಯೇ ಹೊರತು ಕೋನಸ್ ಆರ್ಟಿರಿಯೋಸಸ್ ರೂಪದ್ದಲ್ಲ. ಉದರ ಮಹಾಧಮನಿ ನೇರವಾಗಿ ಹೃತ್ಕುಕ್ಷಿಯಿಂದ ಹೊರಡುತ್ತದೆ. ಅಲ್ಲದೆ ಅದು ತೀರ ಚಿಕ್ಕದಾಗಿದೆ. ಕಿವಿರುಗಳಲ್ಲಿ ಕೇವಲ ನಾಲ್ಕು ಜೊತೆ ಅಭಿವಾಹಿ ಧಮನಿಗಳು (ಅಫರೆಂಟ್ ಆರ್ಟರಿ) ಮಾತ್ರ ಇವೆ. ಹಾಗೆಯೇ ಕೇವಲ ನಾಲ್ಕು ಜೊತೆ ಅಪವಾಹಿ ಧಮನಿಗಳು (ಎಫರೆಂಟ್ ಆರ್ಟರಿ) ಮಾತ್ರ ಉಂಟು. ಎರಡು ಪಾಶ್ರ್ವದ ಮಹಾಧಮನಿಗಳೂ ಸಕ್ರ್ಯುಲಿಸ್ ಸಿಫ್ಯಾಲಿಕಸ್ ಎಂಬ ಉಂಗುರದಂಥ ನಾಳವಾಗಿ ಒಟ್ಟುಗೂಡುತ್ತವೆ. ಇವು ಹಿಂಭಾಗದಲ್ಲಿ ಒಟ್ಟುಗೂಡಿ ಅಭಿಪೃಷ್ಠ ಮಹಾಧಮನಿಯಾಗಿ (ಡಾರ್ಸಲ್ ಅಯೋರ್ಟ) ಪರಿಣಮಿಸುತ್ತವೆ. ಸಕ್ರ್ಯುಲಿಸ್ ಸಿಫ್ಯಾಲಿಕಸ್‍ನಿಂದ ಕ್ಯಾರೊಟಿಡ್ ಆರ್ಟರಿಗಳು ಹೊರಡುತ್ತವೆ. ಪಲ್ಮನರಿ ಆರ್ಟರಿಗಳಿಲ್ಲ. ಎಡಪಾಶ್ರ್ವದಲ್ಲಿ ಮಾತ್ರ ಮೂತ್ರಪಿಂಡಕ್ಕೆ ರಕ್ತ ಹೋಗಿಬರುವ ವ್ಯವಸ್ಥೆಯಿದೆ. ಮಹಾಮಸ್ತಿಷ್ಕದ ಎರಡು ಹೋಳುಗಳು ತೀರ ಸಣ್ಣವಾಗಿದ್ದು ಹೊರಭಾಗದಲ್ಲಿ ಒಂದು ಸೀಳಿನಿಂದ ಪ್ರತ್ಯೇಕಿಸಿದಂತಿವೆ. ಘ್ರಾಣವೃಂತ (ಆಲ್ಫ್ಯಾಕ್ಟರಿ ಪೀಡಂಕಲ್) ಇಲ್ಲ. ಮಹಾಮಸ್ತಿಷ್ಕದ ಹಿಂಭಾಗ ಕಾರ್ಪಸ್ ಸ್ಟ್ರಯೇಟವಾಗಿ ರೂಪುಗೊಂಡಿದೆ. ಅದರ ಎರಡು ಚಾಕ್ಷುಷಪಾಲಿಗಳು ಬಲು ದೊಡ್ಡವು. ಚಾಕ್ಷುಷ ನರಗಳು ಒಂದನ್ನೊಂದು ಅಡ್ಡಹಾಯ್ದರೂ ಚಾಕ್ಷುಷಪಾಲಿಯನ್ನು ಮುಚ್ಚಿಲ್ಲ. ಕಶೇರುರಜ್ಜುವಿನ ಮೂಲ ಚೆನ್ನಾಗಿ ಅಭಿವೃದ್ಧಿಯಾಗಿದ್ದರೂ ಕಾರ್ಪೊರ ರೆಸ್ಟಿಫಾರ್ಮಿಯ ಭಾಗ ಇಲ್ಲ. ಅನುಕಂಪಿ ನರವ್ಯೂಹದ ಶಿರೋವಲಯದಲ್ಲಿ ನರಮುಡಿಗಳಿವೆ. ಕಣ್ಣುಗುಡ್ಡೆಯ ಕೋರಾಯಿಡ್ ಪೊರೆಯಲ್ಲಿ ಕೋರಾಯಿಡ್ ಗ್ರಂಥಿಯಿದೆ. ಕಣ್ಣಿನ ಮಸೂರಕ್ಕೆ ಕಂಪ್ಯಾನುಲಹೆಲರಿಯ ಮೂಲಕ ಒಂದು ಫಾಲ್ಸಿಪಾರಮ್ ಪ್ರೋಸೆಸ್ ಎಂಬ ತಂತು ಸಂಬಂಧಿಸಿದ್ದು ಮಸೂರವನ್ನು ಕೇಂದ್ರೀಕರಿಸಲು ಅನುಕೂಲಿಸುತ್ತದೆ. ಒಳ ಕಿವಿಯ ಎಂಡೊಲಿಂಫ್ ನಾಳ ಹೊರಕ್ಕೆ ತೆರೆಯುವುದಿಲ್ಲ. ಟೆಲಿಯಾಸ್ಟ್ ಮೀನುಗಳಲ್ಲಿ ಅಸ್ಥಿಪಂಜರ ಪೂರ್ಣವಾಗಿ ಎಲುಬಿನಿಂದ ರಚಿತವಾಗಿದೆ. ಬುರುಡೆಯಲ್ಲಿ ಅನೇಕ ಮೂಳೆಗಳ ಆವರಣವನ್ನು ಕಾಣಬಹುದು. ರಾಸ್ಟ್ರಮ್ ಇಲ್ಲ. ಏಳು ಜೊತೆ ವಿಸರಲ್ ಎಲುಬುಗಳಿವೆ. ಮೊದಲ ಜೊತೆ ಮೇಲ್ದವಡೆ ಕೆಳದವಡೆಗಳಾಗಿ ರೂಪುಗೊಂಡು ಬಾಯಿಯ ದ್ವಾರವನ್ನು ರಚಿಸಿದೆ. ಇವೆರಡೂ ಬಾಯಿಯಲ್ಲಿ ಸಂಧಿಸಿದ್ದು ಕಪಾಲದ ಶ್ರವಣಭಾಗಕ್ಕೆ ಸೇರಿಕೊಂಡಿವೆ. ಕಶೇರುಮಣಿಗಳ ಉಭಯ ತಳಗಳಲ್ಲೂ ತಗ್ಗುಗಳುಂಟು (ಆ್ಯಂಫಿಸೀಲಸ್) ಮತ್ತು ಮೂಳೆಯ ಮುಳ್ಳುಗಳು ಇವೆ. ಭುಜದ ರೆಕ್ಕೆಯ (ಪೆಕ್ಟೊರಲ್) ದೂಲ ಎರಡು ಕಡೆಗೂ ಆವರಿಸಿದ್ದು ಪ್ರತಿ ಅರ್ಧಕಟ್ಟಿನಲ್ಲೂ ಸ್ಕಾಪುಲ, ಕೊರಕಾಯಿಡ್, ಕ್ಲೈತ್ರಂ ಮತ್ತು ಪೋಸ್ಟ್ ಟೆಂಪೊರಲ್ ಮೂಳೆಗಳಿವೆ. ಕಟೆದೂಲ ಬೇಸಿ ಟೆರಿಜಿಯಮ್ ಎಂಬ ಒಂದೇ ಮೂಳೆಯಿಂದಾಗಿದೆ. ಟೆಲಿಯಾಸ್ಟಿಯೈ ಗುಂಪಿನಲ್ಲಿ ಲಿಂಗಪ್ರತ್ಯೇಕತೆ ಉಂಟು. ಗಂಡು ಮೀನುಗಳಲ್ಲಿ ಆಲಿಂಗಕಗಳು (ಕ್ಲಾಸ್ಪರ್ಸ್) ಇಲ್ಲ. ಮೂತ್ರಪಿಂಡಗಳು ನೀಳವಾಗಿದ್ದು ಕೆಳತುದಿಯಲ್ಲಿ ಕೂಡಿಕೊಂಡಿವೆ. ಮೂತ್ರನಾಳಗಳು ತಳಭಾಗದಲ್ಲಿ ಒಟ್ಟುಗೂಡಿ ಒಂದು ನಾಳದ ರೂಪದಲ್ಲಿ ಮೂತ್ರ ಕೋಶಕ್ಕೆ ಸಾಗುತ್ತವೆ. ಮೂತ್ರಕೋಶ ಒಂದು ಪ್ರತ್ಯೇಕದ್ವಾರದ ಮೂಲಕ ಹೊರಕ್ಕೆ ತೆರೆಯುತ್ತದೆ. ಗಂಡಿನಲ್ಲಿ ನಿಡಿದಾದ ಎರಡು ವೃಷಣಗಳಿವೆ. ಇವು ಮೂತ್ರಪಿಂಡಗಳೊಡನೆ ಕೂಡಿಕೊಂಡಿಲ್ಲ. ಪ್ರತಿವೃಷಣದಿಂದಲೂ ಹೊರಡುವ ವಾಹಕನಾಳಗಳು ಒಟ್ಟಗೂಡಿ ಒಂದು ನಾಳವಾಗುತ್ತವೆ ಹೆಣ್ಣಿನಲ್ಲಿ ಒಂದು ಜೊತೆ ಅಂಡಾಶಯಗಳುಂಟು. ಇವುಗಳಿಂದ ಒಂದೊಂದು ಅಂಡನಾಳ ಹೊರಟು ತಳಭಾಗದಲ್ಲಿ ಅವೆರಡೂ ಒಟ್ಟಾಗಿ ಸೇರುತ್ತವೆ. ಅಂಡಾಶಯಗಳ ಸುತ್ತ ಒಂದು ಕೋಶ ಇದೆ. ಅಂಡಗಳು ಪೂರ್ಣವಾಗಿ ಭ್ರೂಣಾಹಾರದಿಂದ ತುಂಬಿವೆ. ನಿಶೇಚನ ಹೆಣ್ಣಿನ ದೇಹದಲ್ಲಿ ನಡೆಯದೆ, ಹೊರಗಡೆ ನಡೆಯುವುದು, ನಿಶೇಚಿತ ಅಂಡ ಅಪೂರ್ಣವಾಗಿ ವಿಭಾಗಗೊಂಡು ಬೆಳವಣಿಗೆಯನ್ನು ಆರಂಭಿಸುತ್ತದೆ. ಜೀವನ ಚಕ್ರದಲ್ಲಿ ಡಿಂಬಾವಸ್ಥೆ ಕಂಡುಬರುವುದು.

	ಭಾರತದಲ್ಲಿ ಟೆಲಿಯಾಸ್ಟ್ ಮೀನುಗಳು ಎಲ್ಲೆಡೆಯೂ ಜೀವಿಸುತ್ತವೆ. ಇವು ಆಹಾರಯೋಗ್ಯವಾಗಿರುವುದರಿಂದ ಇವಕ್ಕೆ ಪ್ರಾಮುಖ್ಯ ಉಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ